ಶುಕ್ರವಾರ, ಜೂನ್ 3, 2022
ಅನಘಶ್ರೀ - ಬಹುಭೂಮಿಕೆ - ನಿ-ಡಾ / ಶ್ರೀಪಾದ ಭಟ್/ BAHUBHUMIKE
ಈ ವರ್ಷದ ಕರಾವಳಿಯ ಬಿರುಬೇಸಿಯನ್ನು ತಂಪಾಗಿಸಿದ್ದು ಅಲ್ಲಿ ತಡೆರಹಿತವಾಗಿ ನಡೆಸಿದ ರಂಗತರಬೇತಿಗಳು. ಮೈ ಬೆವರಿನಿಂದ ತೊಯ್ದರೂ ಮನಸು ತಂಪಾಗಿ ಒದ್ದೆಯಾಗಿತ್ತು.
ಏಪ್ರಿಲ್ ಮಧ್ಯದಿಂದ ಆರಂಭ.
ಕುಮಟಾ ಬಿ.ಇಡಿ.ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಿದ ರಂಗತರಬೇತಿ ಮುಕ್ತಾಯವಾಗುತ್ತಿದ್ದಂತೆ ಹೊನ್ನಾವರದ ಸಹಯಾನದ ರಂಗತರಬೇತಿ ಆರಂಭ. ಅದು ಮುಗಿದ ಮಾರನೇ ದಿನದಿಂದ ಉಡುಪಿಯಲ್ಲಿ.
ಭರತನಾಟ್ಯ ಹಾಗೂ ಯಕ್ಷಗಾನ ಕ್ಷೇತ್ರದ ಗುರು ಸುಧೀರ ಕೊಡವೂರು ಹಾಗೂ ನೃತ್ಯ ಹಾಗೂ ಸಿನೆಮಾ ಕ್ಷೇತ್ರದ ವಿಶಿಷ್ಢ ಸಾಧಕಿ ಮಾನಸಿಯವರ ನೃತ್ಯನಿಕೇತನ ಕೊಡವೂರು ಉಡುಪಿ ತಂಡದ ಕಿರಿಯ ವಿದ್ಯಾರ್ಥಿಗಳಿಗಾಗಿ ಅಭಿನಯ ತರಬೇತಿ. ನೃತ್ಯದ ವಿದ್ಯಾರ್ಥಿಗಳಿಗೂ ಅಭಿನಯದ ಸೂಕ್ಷ್ಮಗಳು ದಕ್ಕಲೆಂದು ಪ್ರತಿ ವರ್ಷವೂ ಸುಧೀರ್ ಮಾನಸಿಯವರು ಇಂತದೊಂದು ಶಿಬಿರ ನಡೆಸುತ್ತಾರೆ. ನೃತ್ಯ, ನಾಟಕ, ಸಾಹಿತ್ಯ, ಸಂಗೀತ ಇವೆಲ್ಲವೂ ಬೇರೆ ಬೇರೆ ತಾಣಗಳಾಗಿ ಹರಿದು ಹಂಚಿಹೋಗಿರುವ ಹೊತ್ತಿನಲ್ಲಿ ರಂಗಭೂಮಿಯವರನ್ನು ಕರೆದು ನೃತ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವದು ನನಗೆ ತಿಳಿದಂತೆ ತುಂಬ ಅಪರೂಪ. ಈ ತರಬೇತಿಗೆ ಸಾತ್ ನೀಡಿದ ಹಿರಿಯಡ್ಕದ ಸಂಸ್ಕೃತಿ ಟ್ರಸ್ಟಿನ ಮುರಳೀಧರ ಉಪಾಧ್ಯರನ್ನೂ ವಂದಿಸುತ್ತ, ತರಬೇತಿಯ ಕೊನೆಯ ದಿನ ಶಿಬಿರದ ವಿದ್ಯಾರ್ಥಿಗಳು ಪ್ರಯೋಗಿಸಿದ ಅಭ್ಯಾಸ ಪಠ್ಯದ ಬಗ್ಗೆ ಆ ದಿನ ಪ್ರೇಕ್ಷಕರಾಗಿದ್ದ ನೃತ್ಯನಿಕೇತನ ಸಂಸ್ಥೆಯ ಹಿರಿಯ ಕಲಾವಿದೆ ಅನಘಶ್ರೀ ಅವರು ಕಳುಹಿಸಿದ ಅನಿಸಿಕೆಯನ್ನು ಹಂಚಿಕೊಳ್ಳುತ್ತಿರುವೆ
ನನ್ನಂತಹ ಅನೇಕರ ನೃತ್ಯಬದುಕನ್ನು ಬೆಳಗಿದ ನೃತ್ಯನಿಕೇತನ ಕೊಡವೂರು ಸಂಸ್ಥೆ ಯಾವಾಗಲೂ ಪರಂಪರೆ ಮತ್ತು ಪ್ರಯೋಗವನ್ನು ಜತೆ ಜತೆಯಲ್ಲಿಯೇ ಬಾಳಿಸುತ್ತ ಬಂದಿದೆ. ಅದಕ್ಕೆಂದೇ ಅಭಿನಯದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಗತಿಗಳನ್ನು ತನ್ನ ವಿದ್ಯಾರ್ಥಿಗಳಿಗಾಗಿ ಸಂಘಟಿಸುತ್ತ ಬಂದಿದೆ. ಅಂತೆಯೇ ಮೇ 9 ರಿಂದ 22 ರ ತನಕ ಸಂಸ್ಥೆಯಲ್ಲಿ ನೃತ್ಯ ಕಲಿಯುತ್ತಿರುವ ಕಿರಿಯ ವಿದ್ಯಾರ್ಥಿಗಳಿಗಾಗಿ ಬಹುಭೂಮಿಕೆ ಎಂಬ ಅಭಿನಯ ತರಬೇತಿ ಕಾರ್ಯಾಗಾರವನ್ನು ನಡೆಸಿತು. ಅಭಿನಯದ ಪಾಠಗಳನ್ನು ಹೇಳಿಕೊಡಲು ಈಗಾಗಲೇ ಸಂಸ್ಥೆಗಾಗಿ ಚಿತ್ರಾ, ನೃತ್ಯಗಾಥಾ ಹಾಗೂ ನಾರಸಿಂಹದಂತಹ ರಂಗಪ್ರಯೋಗವನ್ನು ನಿರ್ದೇಶಿಸಿದ್ದ ಡಾ. ಶ್ರೀಪಾದ ಭಟ್ ಅವರನ್ನು ಕರೆಸಲಾಗಿತ್ತು. ಶಿಬಿರದ ಕೊನೆಯಲ್ಲಿ ಶಿಬಿರಾರ್ಥಿಗಳು ಕಲಿಕೆಗಾಗಿ ಒದಗಿಸಿದ್ದ ಅಭ್ಯಾಸ ಪಠ್ಯಗಳನ್ನು ಪ್ರದರ್ಶಿಸಿದರು. ಈ ಪ್ರದರ್ಶನದಲ್ಲಿ ಕವನ ವಾಚನ, ರೂಪಕ, ಕಥಾಭಿನಯ, ಬೀದಿನಾಟಕ ಹಾಗೂ ಗೀತನಾಟಕ ಇಷ್ಟೂ ಮಾದರಿಗಳಿದ್ದವು.
ಶಿಬಿರಾರ್ಥಿಗಳು
ಮೊದಲಿಗೆ ಪ್ರದರ್ಶಿಸಿದ್ದು ಸವಿತಾ ನಾಗಭೂಷಣ ಅವರ ಕವನ ಮಂಡನೆಯನ್ನ. ಸಮಯವಿದೆಯೇ ಪಪ್ಪ ಎಂಬ ಆ ಕವನವು ಬಹಳ ಪ್ರಾಮಾಣಿಕವಾದ ಸಾತ್ವಿಕ ಅಭಿನಯದಿಂದ ಮನಸನ್ನು ಒದ್ದೆ ಮಾಡಿತು. ನಂತರ ಸುಧಾ ಆಡುಕಳ ಅವರು ರಚಿಸಿದ್ದ ಮರ ಮತ್ತು ಮನುಷ್ಯ - ಎಂಬ ರೂಪಕದ ಪ್ರದರ್ಶನ. ಮರದ ತ್ಯಾಗ ಮತ್ತು ಮನುಷ್ಯನ ಕ್ರೌರ್ಯವನ್ನು ಮನಮಿಡಿಯುವಂತೆ ಮಂಡಿಸುವ ಈ ರೂಪಕದಲ್ಲಿ ಮರದ ಪಾತ್ರ ನಿರ್ವಹಿಸಿದ್ದು 3 ಜನ ಅಂತ ಒಂದೆರಡು ನಿಮಿಷದ ನಂತರ ಮರೆತೇ ಹೋಯ್ತು. ಒಂದು unit ಆಗಿ ನಟಿಸಿದ್ರು ನಟಿಯರು. ಸನ್ನಿವೇಶಗಳ ಅಭಿವ್ಯಕ್ತಿಗಾಗಿ ಬಳಸಿದ ವಿಶಿಷ್ಠ ಆಂಗಿಕ ಅಭಿನಯದ ಬಳಕೆ ಬಹಳ ಇಷ್ಟ ಆಯ್ತು. ವಸ್ತುವಿನ ನಿರ್ವಹಣೆಯ ಕುರಿತು ಅವರಲ್ಲಿ ಇದ್ದ clarity ಸ್ಪಷ್ಟವಾಗಿ ಕಾಣ್ತಾ ಇತ್ತು. ನಂತರ ಪ್ರಯೋಗಗೊಂಡಿದ್ದು ಮರ ಮತ್ತು ಆನೆ ಎಂಬ ಕತೆಯ ವಾಚಿಕಾಭಿನಯ. ಇಡಿಯ ಪ್ರಯೋಗವೇ ತುಂಬ powerful ಆಗಿ ಇತ್ತು. ನಟರಲ್ಲಿ ಎಷ್ಟೊಂದು ತನ್ಮಯತೆ!ಅದರಲ್ಲಿದ್ದ raw emotion ಸ್ವೀಕರಿಸುವಷ್ಟು ಬಹುಷಃ ನನ್ನಲ್ಲೇ ತಾಕತ್ತು ಇರಲಿಲ್ಲ.
ಆಮೇಲೆ ಪ್ರಯೋಗಗೊಂಡಿದ್ದು ಬೀದಿ ನಾಟಕ ಮಾದರಿಯ ನಾನು ಒಬ್ಬ ಹೆಣ್ಣು ಎಂಬ ಕವನದ ಪ್ರಸ್ತುತಿ. ಪ್ರದರ್ಶನ ಆಗಿ ದಿನ ಒಂದು ಕಳೆದರೂ ನನಗೆ ಆ ಗುಂಗಿನಿಂದ ಹೊರಬರಲಾಗಿರಲಿಲ್ಲ. ಹೆಣ್ಣಿಗೆ ತಾಯಿ, ತಂಗಿ, ಹೆಂಡತಿ, ಮಗಳು ಹೀಗೆಲ್ಲ roles assign ಮಾಡುವುದು, ನಂತರ ಅವಳಿಂದ expect ಮಾಡುವುದು ಅನೂಚಾನವಾಗಿ ನಡೆದುಬಂದ ಬಗೆ. ಇದನ್ನು ಕಾಣಿಸುತ್ತಲೇ ಹೆಣ್ಣು ಈ ಎಲ್ಲ ಪಾತ್ರಗಳನ್ನು ಮೀರಿ, ತನ್ನ ಅಸ್ಮಿತೆಯನ್ನು ಕಾಣಿಸ ಹೊರಟ ರೀತಿ ಮನ ಮುಟ್ಟಿತು. ನಟಿಸಿದ ಎಲ್ಲ ಹುಡುಗಿಯರು ಇದನ್ನು ಇಷ್ಟು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಾದದ್ದು ಕವನ ಅವರ ಮನದೊಳಗೆ ಇಳಿದ ರೀತಿಯಿಂದ ಅನಿಸ್ತು. ಅವರದನ್ನ ಅನುಭವಿಸಿ ಅಭಿನಯಿಸಿದ್ರು. ಮನಸ್ಸು ಭಾರ ಆಗಿತ್ತು. ಅದಕೆ ತಂಪೆರೆಯುವುದಕ್ಕೇ ಅನ್ನುವಂತಿತ್ತು ಮುಂದೆ ಪ್ರದರ್ಶಸಿದ ಸಫ್ದರ್ ಹಶ್ಮಿಯವರ ಕೆಂಪು ಹೂ ಎಂಬ ಸಂಗೀತನಾಟಕ.
ಒಮ್ಮೆ ರಂಗದ ಮೇಲೆ ನಟಿಸುತ್ತಾ ಇರುವವರು, ಸ್ವಲ್ಪ ಹೊತ್ತಲ್ಲಿ ಸಂಗೀತ ನಿರ್ವಹಿಸುತ್ತಾ ಇರ್ತಾರೆ, ಮತ್ತೆ ಆ transition ಕೂಡಾ ಅಷ್ಟೆ smooth. ಸಂಗೀತ ಮನಸ್ಸಿಗೆ ಬಹಳ ಹಿಡಿಸಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ ಈ ಮಕ್ಕಳನ್ನು ಈ ಮೊದಲು ನೋಡಿದ್ದೆ. ಅವರಲ್ಲಿ ಆದ ಬದಲಾವಣೆ ಎದ್ದು ಕಾಣುತ್ತಿತ್ತು. ಕೆಲವರಲ್ಲಿ ಹೀಗೊಂದು ಸಾಮರ್ಥ್ಯ ಉಂಟು ಅಂತ ಗೊತ್ತಿತ್ತು, ಈಗ ಅದು ಮತ್ತಷ್ಟು ಉನ್ನತವಾಗಿ ವೃದ್ಧಿಸಿದ್ದು ಎದ್ದು ಕಂಡಿತು. ಅಲ್ಲದೆ ಇಡೀ ತಂಡದ ಮಧ್ಯ ಹುಟ್ಟಿಕೊಂಡ bond, ರಂಗದ ಮೇಲೂ, ಅದರ ಹೊರಗೂ ಸ್ಪಷ್ಟವಾಗಿ ಕಾಣ್ತಾ ಇತ್ತು.
ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಓದುತ್ತಿರುವವರೆಗಿನ ಮಕ್ಕಳು ಇದ್ರೂ, ಅವರನ್ನು blend ಆಗುವ ಹಾಗೆ ಮಾಡಿ, ಪ್ರತಿಯೊಬ್ಬರ strengthಅನ್ನು ಬಳಸಿ, ಇದೇ ಮೊದಲ ಬಾರಿ ಇಂತಹದೊಂದು ಪ್ರದರ್ಶನವನ್ನು ನೀಡಿದ್ದಾದರೂ ಅದನ್ನು ಆತ್ಮವಿಶ್ವಾಸ ಮತ್ತು clarityಇಂದ ಮಾಡುವಂತೆ ಮಾಡಿದ್ದು - ಅದರಲ್ಲೂ ಇದನ್ನು 10 ದಿನದಲ್ಲಿ ಆಗುವಂತೆ ಮಾಡಲು ಶ್ರೀಪಾದ್ ಸರ್ ಕಲಿಸುವ ರೀತಿಯಿಂದ ಮಾತ್ರ ಸಾಧ್ಯ.
ತಮ್ಮ ಶಿಷ್ಯರಿಗೆ ನೃತ್ಯ ಕಲಿಸುವುದರ ಜೊತೆಗೆ ಇಂತಹ ಅನುಭವಗಳಿಗೆ ಅವಕಾಶ ಮಾಡಿ ಕೊಡುವ ಸುಧೀರ್ ಸರ್, ಮಾನಸಿ ಅಕ್ಕ ನಿಜಕ್ಕೂ ಅಭಿನಂದನೀಯರು.
ಸೋಮವಾರ, ನವೆಂಬರ್ 16, 2020
ಶುಕ್ರವಾರ, ಜುಲೈ 17, 2020
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)