ಭಾನುವಾರ, ಜೂನ್ 26, 2016

ಜೀವನ್ ಶೆಟ್ಟಿ - ನೃತ್ಯ ನಿಕೇತನ ರಜತ ಪಥದ ನೃತ್ಯ - ನಾಟಕಗಳು

***ನಾಟ್ಯ ರೂಪಕಗಳಲ್ಲಿ ಕಣ್ಮನ ತಣಿಸಿದ ದೃಶ್ಯ ಕಾವ್ಯಗಳು - ಒಂದು ಅನುಭವ
ಉಡುಪಿಯಲ್ಲಿ ಎಡೆಬಿಡದ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವುದೇ ಋತುಭೇದವಿಲ್ಲದೆ ಜರುಗುತ್ತಿರುತ್ತವೆ. ಅದರಲ್ಲಿ ಇತ್ತೀಚೆಗೆ ಭರತ ನಾಟ್ಯ ಕಲೆಯನ್ನು ವಿಶಿಷ್ಟವಾಗಿ ಪ್ರಸ್ತುತ ಪಡಿಸಲು ಪ್ರಯತ್ನಿಸುವ ನೃತ್ಯನಿಕೇತನ ಕೊಡವೂರು ಸಂಸ್ಥೆಯು ತನ್ನ ರಜತವರ್ಷದ ಸಲುವಾಗಿ ಹತ್ತು ದಿನಗಳ 'ನೃತ್ಯ ಸಂಗೀತ ನಾಟಕ ಉತ್ಸವ'ವನ್ನು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿತ್ತು. ಮಾನಸಿಯವರ 'ಮಹಾನಾಯಿಕೆ ಹಿಡಿ೦ಬೆ', ತ್ರಿವಳಿ ಗಾನಾಮೃತಂ, ದಿವ್ಯಾರವಿಯವರ 'ಮಂಜರಿ', ಸ್ಪೂರ್ತಿ ಬೆ೦ಗಳೂರು ಅವರ 'ನೃತ್ಯ ವರ್ಷ', ಡಾ ಶ್ರೀಪಾದ ಭಟ್ ಅವರ 'ಮಹಿಳಾ ಭಾರತ' ನಾಟಕ ಮತ್ತು 'ಚಿತ್ರಾ' ನೃತ್ಯ ನಾಟಕ, ಸಂಸ್ಥೆಯ ವಿದ್ಯಾರ್ಥಿಗಳಿಂದ 'ನೃತ್ಯ ದರ್ಪಣಂ', ದೀಪಕ್ ಹೆಬ್ಬಾರ್ ಅವರ ವೇಣುವಾದನ ಹಾಗೂ ಸುರಭಿಯ 'ನೃತ್ಯಾರ್ಪಣಂ' ಕಲಾಸಕ್ತ ಪ್ರೇಕ್ಷಕವರ್ಗಕ್ಕೆ ರಸದೌತಣ ನೀಡಿತ್ತು. ಅವುಗಳಲ್ಲಿ ಹೊಸ ಪ್ರಯೋಗ ಎಂಬ ಟ್ಯಾಗ್ ನ ಟ್ಯಾಗೋರ್ ರಚಿತ 'ಚಿತ್ರಾ' ನೃತ್ಯ ನಾಟಕ ಮತ್ತು ಸುರಭಿಯ 'ರಂಗ ಪ್ರವೇಶ' ಗಮನ ಸೆಳೆಯಿತು.
'ಚಿತ್ರಾ' ದೃಶ್ಯಕಾವ್ಯವನ್ನು ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ 'ಅವಧಿ'ಯಲ್ಲಿ ಅಹಲ್ಯಾ ಬಲ್ಲಾಳ್ ಅವರು ಬರೆದಿದ್ದಾರೆ. ಶಾಸ್ತ್ರೀಯ-ಜನಪದ-ಯಕ್ಷಗಾನಗಳ ಮಿಶ್ರಣದ ನರ್ತನ, ಭಾವ, ಅಭಿನಯ, ಮಾತುಗಾರಿಕೆ, ನೃತ್ಯ ಸಂಯೋಜನೆ, ನಿರ್ದೇಶನ, ಸಂಗೀತ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆಗಳ ಸಂವೇದನಾ ಶೀಲ ಸ್ಪರ್ಶ 'ಚಿತ್ರಾ' ಯಶಸ್ಸಿಗೆ ಕಾರಣ ಎನ್ನಬಹುದು. ಇಬ್ಬರು ನಟಿಯರ ಮೂಲಕ ಚಿತ್ರಾ೦ಗದೆ ಅರ್ಜುನನನ್ನು ಓಲೈಸುವ ಸಲುವಾಗಿ ಚೆಲುವೆಯಾಗಿ ಪರಿವರ್ತನೆಗೊಳ್ಳುವ ದೃಶ್ಯ ‘ಹೈಲೈಟ್’ ಭಾಗ! ಇಲ್ಲಿ ಶೃಂಗಾರ ರಸದ ಆಕರ್ಷಕ ವಾತಾವರಣ ಕೆಲಸ ಮಾಡಿದೆ. ಶಿಳ್ಳೆಗಳ ಜತೆಗೆ ‘ಒನ್ಸ್ ಮೋರ್’ ಕೂಗು ಈ ನೃತ್ಯ ರೂಪಕದಲ್ಲಿ ಕೇಳಿಸಿದೆ !
ಆಹ್ವಾನ ಪತ್ರಿಕೆಯಲ್ಲಿ ಕೊನೆಯ ದಿನ ಪುಟ್ಟ ಬಾಲೆ ಸುರಭಿಯ ರಂಗ ಪ್ರವೇಶ ಓದಿ ತುಂಬಾ ಪುಳಕಿತನಾಗಲು ಕಾರಣ ಅಂದೇ ಅವಳ ಎಂಟರ ಹುಟ್ಟುಹಬ್ಬ! ಕಳೆದ ಮೂರು ವರ್ಷಗಳಿಂದ ಸುರಭಿ ನಮ್ಮ ಗೆರೆಬರೆ ಶಾಲೆಯ ಚಿನಕುರಳಿ ವಿದ್ಯಾರ್ಥಿನಿ. ಒಂದೂವರೆ ಗಂಟೆ ಕಾಲಾವಧಿಯ ಏಕ ವ್ಯಕ್ತಿ ಭರತ ನಾಟ್ಯ ಪ್ರದರ್ಶನ ಕೊಡುವ ಮಟ್ಟಿಗೆ ತಯಾರಾದಳೇ ಎಂಬ ಕುತೂಹಲ, ಅಪಾರ ಪ್ರೇಕ್ಷರೆದುರು ನರ್ತಿಸಿದಾಗ ಬೃಹತ್ ವೇದಿಕೆಯಲ್ಲಿ ಮತ್ತು ಪರದೆಯಲ್ಲಿ ಎಲ್ಲರಂತೆ ಕಂಡು ದಂಗಾದೆ ! ಸುರಭಿಯ ಮನೆಯೇ ನೃತ್ಯ ಶಾಲೆ. ತಂದೆ ವಿದ್ವಾನ್ Sudhir Rao, ತಾಯಿ ವಿದುಷಿ Manasi Sudhirಯವರಿಂದ ಬಳುವಳಿ ಪಡೆದ ಅನನ್ಯ ಪ್ತತಿಭೆಯಾಗದಿರಲು ಸಾಧ್ಯವೇ !! ದೇಶ ಪ್ರೇಮದ ಮತ್ತು ಶ್ಯಾಮ ಸುಧಾಮರ ಸ್ನೇಹ ಬಂಧದ ಬಗ್ಗೆ ರೂಪಕಗಳನ್ನು ಸಲೀಸಾಗಿ ಪ್ರದರ್ಶಿಸಿದಳು. ಸೂಕ್ಷ್ಮ ಭಾವ, ಮುದ್ರೆ, ಹೆಜ್ಜೆಗಳನ್ನು ಚೆನ್ನಾಗಿ ಅರಗಿಸಿ ಕೊಂಡಿದ್ದಳು. ಗಾಯನ ವಾದ್ಯ ವೃಂದದವರ ಸಹಕಾರ ಸ್ತುತ್ಯಾರ್ಹ ! ಸಂಸ್ಥೆಗೂ ಸುರಭಿಗೂ ಉಜ್ವಲ ಭವಿಷ್ಯಕ್ಕೆ ಹಾರೈಸೋಣ !
Bharatanatya and Nrutya Nataka Programmes of Nritya Niketana Kodavoor { June 2016 }- Review by Jeevan Shetty

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ